ಚಾತುರ್ಮಾಸ್ಯ -
 	ಆಷಾಢಮಾಸದಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಒಂದು ವ್ರತ. ಈ ವ್ರತನೇಮಗಳ ಪಾಲನೆಯಿಂದ ನಿದ್ರಾಸಕ್ತನಾದ ವಿಷ್ಣು ಸಂತೃಪ್ತನಾಗುತ್ತಾನೆ ಎನ್ನಲಾಗಿದೆ. ಆಷಾಢ ಶುಕ್ಲ ಏಕಾದಶೀ, ದ್ವಾದಶೀ ಹುಣ್ಣಿಮೆ, ಕರ್ಕಾಟಕ ಸಂಕ್ರಮಣ ಇವುಗಳಲ್ಲೊಂದು ದಿವಸ ಈ ವ್ರತವನ್ನು ಪ್ರಾರಂಭಿಸುತ್ತಾರೆ. ಪ್ರಾರಂಭದ ಕಾಲ ಭಿನ್ನವಾಗಿದ್ದರೂ ವ್ರತಸಮಾಪ್ತಿಯ ಕಾಲ ಮಾತ್ರ ಕಾರ್ತಿಕ ಶುಕ್ಲ ದ್ವಾದಶೀಯೇ. ಶೈವ-ವೈಷ್ಣವರಾದಿಯಾಗಿ ಎಲ್ಲರಿಗೂ ವ್ರತದ ವಿಧಿನಿಯಮಗಳು ಸಮಾನ. ಜೈನ ಮತ್ತು ಬೌದ್ಧರಲ್ಲೂ ಇದು ಆಚರಣೆಯಲ್ಲಿದೆ. ಈ ವ್ರತದಲ್ಲಿ ನಿತ್ಯ ಮತ್ತು ಕಾಮ್ಯ ಎಂದು ಎರಡು ವಿಧ.

ತರಕಾರಿ, ಮೊಸರು, ಹಾಲು, ದ್ವಿದಳಧಾನ್ಯ ಇವುಗಳಲ್ಲಿ ಕ್ರಮವಾಗಿ ಒಂದೊಂದನ್ನು ಒಂದೊಂದು ತಿಂಗಳಿನಲ್ಲಿ ಬಳಸದಿರುವುದು ನಿತ್ಯವ್ರತ. ಈ ವ್ರತ ಸಂಕಲ್ಪಕ್ಕೆ ಮೊದಲು ಭಗವಂತನನ್ನು ಪೂಜಿಸಿ 'ನಿನ್ನ ನಿದ್ರೆಯೇ ಜಗತ್ತಿಗೆ ನಿದ್ರೆ, ನಿನ್ನ ಎಚ್ಚರವೇ ಜಗತ್ತಿಗೆ ಎಚ್ಚರ. ಎಲೈ ಅಚ್ಯುತನೇ, ನೀನು ಪ್ರಸನ್ನನಾಗು ಎಂದು ಪ್ರಾರ್ಥಿಸುತ್ತಾರೆ.
ಬೇರೆ ಬೇರೆ ಫಲಗಳನ್ನುದ್ದೇಶಿಸಿ ಬೆಲ್ಲ ಎಣ್ಣೆ ಮೊದಲಾದ ಪದಾರ್ಥಗಳನ್ನು ಬಳಸದಿರುವುದು, ಒಂದು ಹೊತ್ತು ಅಥವಾ ದಿನ ಬಿಟ್ಟು ದಿನ ಊಟಮಾಡುವುದು-ಇವೇ ಮೊದಲಾದ ನಿಯಮಗಳಿಂದಿರುವುದು ಕಾಮ್ಯವ್ರತ.

ಹೊಸತಾಗಿ ವ್ರತ ಹಿಡಿಯುವವರು ಗುರ್ವಸ್ತ, ಶುಕ್ರಾಸ್ತ ಮತ್ತು ಸೂತಕ ಕಾಲಗಳಲ್ಲಿ ಈ ವ್ರತವನ್ನು ಪ್ರಾರಂಭಿಸಕೂಡದು. ಆಷಾಢಮಾಸ ಅಧಿಕಬಂದಾಗ ನಿಜ ಆಷಾಡಮಾಸದಲ್ಲೇ ಈ ವ್ರತವನ್ನು ಪ್ರಾರಂಭಿಸಬೇಕು. ಶ್ರಾವಣ, ಭಾದ್ರಪದ, ಆಶ್ವಯುಜ ಮಾಸಗಳಲ್ಲೊಂದು ಅಧಿಕ ಬಂದರೆ ಅಧಿಕ ಮತ್ತು ನಿಜ ಈ ಎರಡು ಮಾಸಗಳಲ್ಲೂ ಆ ತಿಂಗಳಿನ ನಿಯಮವನ್ನೇ ಪಾಲಿಸಬೇಕು. ವ್ರತವನ್ನು ಪ್ರಾರಂಭಿಸಿ ಮುಗಿಸುವುದಕ್ಕೆ ಮೊದಲು ವ್ಯಕ್ತಿ ಮೃತನಾದರೂ ಆತನಿಗೆ ವ್ರತವನ್ನು ಪೂರ್ಣವಾಗಿ ಆಚರಿಸಿದ ಫಲ ಪ್ರಾಪ್ತಿಯಾಗುತ್ತದೆ.

ಚಾತುರ್ಮಾಸ್ಯದ ಕಾಲ ಮಳೆಗಾಲ. ಆಗ ಅನೇಕ ಜಂತುಗಳು ಹಾದಿಬೀದಿಗಳಲ್ಲಿ ಹೆಚ್ಚಾಗಿ ಸಂಚರಿಸುವುದರಿಂದ ಅವು ಕಾಲಿಗೆ ಸಿಕ್ಕಿ ಸಾಯಬಾರದೆಂಬ ಉದ್ದೇಶದಿಂದಲೂ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾದ್ದರಿಂದಲೂ ಸಂನ್ಯಾಸಿಗಳು ಈ ಕಾಲದಲ್ಲಿ ಸಂಚಾರವನ್ನು ನಿಲ್ಲಿಸಿ ಒಂದೆಡೆ ತಂಗುತ್ತಾರೆ. ಹುಣ್ಣಿಮೆಯಂದು ಯತಿಗಳಾದವರು ಕ್ಷೌರ ಮಾಡಿಸಿಕೊಂಡು ಈ ನಾಲ್ಕು ತಿಂಗಳುಗಳಲ್ಲಿ ಒಂದೆಡೆಯಲ್ಲೆ ವಾಸಿಸುತ್ತೇವೆ ಎಂದು ಸಂಕಲ್ಪಮಾಡಿ ಶ್ರೀಕೃಷ್ಣ ವ್ಯಾಸ ಮತ್ತು ಭಾಷ್ಯಕಾರರನ್ನು ಪರಿವಾರದೊಡನೆ ಪೂಜಿಸಿ ಶಾಸ್ತ್ರಪುರಾಣೇತಿಹಾಸಾದಿ ಪ್ರವಚನಗಳನ್ನು ನಡೆಸುತ್ತ ಕಾಲ ಕಳೆಯುತ್ತಾರೆ. ನಾಲ್ಕು ತಿಂಗಳೂ ಒಂದೆಡೆಯಲ್ಲೇ ಇರಲು ಸಾಧ್ಯವಾಗದವರು ಎರಡು ತಿಂಗಳ ಕಾಲವಾದರೂ ಇರುತ್ತಾರೆ. ಆಷಾಢಮಾಸದಲ್ಲಿ ಚಾತುರ್ಮಾಸ್ಯ ಸಂಕಲ್ಪಮಾಡದವರು, ಅಶಕ್ತರು, ಆಶ್ವಯುಜಮಾಸ ಶುಕ್ಲ ದ್ವಾದಶೀ ದಿವಸ ವ್ರತವನ್ನು ಪ್ರಾರಂಭಿಸಿ ಕಾರ್ತಿಕ ಶುಕ್ಲ ದ್ವಾದಶೀ ದಿವಸ ಮುಗಿಸುತ್ತಾರೆ. ಹೆಂಗಸರು ಮದುವೆಯಾದ ವರ್ಷದಿಂದ ಐದು ವರ್ಷಗಳ ಕಾಲ ಈ ನಾಲ್ಕು ತಿಂಗಳುಗಳಲ್ಲಿ ಗೋಪದ್ಮ ವ್ರತವನ್ನು ಮಾಡುತ್ತಾರೆ. ಇಂಥ ವ್ರತಗಳಲ್ಲದೆ ಶ್ರುತಿಯಲ್ಲಿ ವಿಧಿಸಿರುವಂತೆ ಫಾಲ್ಗುಣ ಅಥವಾ ಚೈತ್ರ, ಆಷಾಢ, ಕಾರ್ತಿಕ ಹುಣ್ಣಿಮೆಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಮಾಡುವ ವೈಶ್ವದೇವ, ವರುಣಪ್ರಘಾಸ, ಸಾಕಮೇಧ ಮತ್ತು ಶುನಾಸೀರೀಯ ಎಂಬ ನಾಲ್ಕು ಚಾತುರ್ಮಾಸ್ಯ ಯಾಗಗಳೂ ಇವೆ. 									(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ